Friday 24 November 2017

ಕಾಜಾಣಕಂಡು ಹಿಂತಿರುಗುವಾಗ ಸಿಕ್ಕಿದ್ದು ಮಿಂಚುಳ್ಳಿ

ಕಾಜಾಣಕಂಡು ಹಿಂತಿರುಗುವಾಗ ಸಿಕ್ಕಿದ್ದು ಮಿಂಚುಳ್ಳಿ, ಆ ಸಮಯದಲ್ಲಿ ಹಕ್ಕಿಯ ಮೊದಲ ಆಧ್ಯತೆ ಬೇಟೆಯಾಗಿತ್ತು, ಎರಡು ತನ್ನ ಸುರಕ್ಷತೆ ಹಾಗು ಮೂರನೆಯದು ತನ್ನ ಪ್ರಾಂತ್ಯದಲ್ಲಿ ಬೇರೆ ಮಿಂಚುಳ್ಳಿಬಾರದ ಹಾಗೆ ಎಚ್ಚರವಿರುವುದು!
ಎರಡುಗಂಟೆಗಳಲ್ಲಿ ಕೇವಲ ಎರಡೇ ಜಿಗಿತ ಹಿಡಿದಿದ್ದು ಎರಡುಹುಳು ಮಾತ್ರ - ಶೆಖಡ ೧೦೦% ಯಶಸ್ವಿ ಪ್ರಯತ್ನ!
ಕಲಿತದ್ದು? -
೧. ಅಗಾಧವಾದ ತಾಳ್ಮೆ, ಏಕಾಗ್ರತೆ ಹಾಗು ತನ್ನಕೆಲಸದ ಮೇಲೆ ತೀವ್ರನಿಗ (ಫೊಕಸ್),
೨. ಮಾತ್ತು ಪಟ್ಟುಹಿಡಿದು ಕೂತಲ್ಲೇ ಕುಳಿತು ತನ್ನ ಕಾರ್ಯಸಾಧನೆ (ಪರ್ಸಿಸ್ಟನ್ಸ್) - ಬೇಟೆಯಾಡುವುದಕ್ಕೆ ಎಷ್ಟು ಕೌಶಲ್ಯವಿರುತ್ತದೋ, ಬೇಟೆಗೆ ತಪ್ಪಿಸಿಕೊಳ್ಳಲ್ಲು ಅದಕ್ಕಿಂತ ಹೆಚ್ಚು ಮಾರ್ಗಗಳಿರುತ್ತದೆ - ಇವಕ್ಕೆ ಹೊಟ್ಟೆಪಾಡಾದರೆ ಅದಕ್ಕೆ ಸಾವು ಬದುಕಿನ ಪ್ರಶ್ನೆ.
೨. ಪ್ರಕೃತಿಯಲ್ಲಿ ದುರ್ಬಲತೆಗೆ ಜಾಗವಿಲ್ಲ, ಅಲ್ಲಿ ನೂರಾರು ಹುಳುಗಳಿದ್ದು ಯಾವುದೋ ದುರ್ಬಲ ಹುಳ ಮಿಂಚುಳ್ಳಿಗೆ ಆಹಾರವಾಗಿ ನಶಿಸಿಹೋಗಿತ್ತು. ಮಿಂಚುಳ್ಳಿ ಪ್ರಭಲವಾಗಿದ್ದರಿಂದ ಅದರ ಪ್ರಾಂತ್ಯಪ್ರವೇಶಿಸಿದ ಇನ್ನೊಂದು ಮಿಂಚುಳ್ಳಿಯನ್ನು ಓಡಿಸುವಲ್ಲಿ ಯಶಸ್ವಿಯಾಗಿ ತನ್ನ ಜಾಗವನ್ನು ರಕ್ಷಿಸಿಕೊಂಡಿತು, ಇಲ್ಲವಾದಲ್ಲಿ ತನ್ನ ಜಾಗ ತನ್ನ ಜಿವನೋಪಾಯವನ್ನು ಇನ್ನೊಂದು ಹಕ್ಕಿ ಲಪಟಾಯಿಸಿಬಿಡುತ್ತಿತ್ತು!
ಈ ನಿಯಮ ನಮಗೂ ಅನ್ವಯ, ಕಾರ್ಯಸಾಧನೆಗಾಗಿ ಅಗಾಧವಾದ ತಾಳ್ಮೆ, ಏಕಾಗ್ರತೆ ಹಾಗು ಹಿಡಿದ ಕೆಲಸ ಮುಗಿಸುವವರೆಗೂ ಏನೇ ಅಡೆತಡೆಗಳು ಬಂದರೂ ಮಧ್ಯೆ ಬಿಡದೆ ನಿರಂತರ ಪರಿಶ್ರಮ, ಎಲ್ಲದಕ್ಕಿಂತ ಹೆಚ್ಚು ಮಾನಸಿಕ ಪ್ರಾಭಲ್ಯತೆಯ ಅಗತ್ಯವಿದೆ!

Monday 20 November 2017

ಕಾಜಾಣ, ಮಿಂಚಿಳ್ಳಿಯ ಹಿಂದೆ ಹೋದಾಗ ಕಂಡದ್ದು ಗೀಚಿದ್ದು

ಕಾಜಾಣ, ಮಿಂಚಿಳ್ಳಿಯ ಹಿಂದೆ ಹೋದಾಗ ಕಂಡದ್ದು ಗೀಚಿದ್ದು -
ಬೆಳ್ಳಂಬೆಳಿಗ್ಗೆ ಎದ್ದದ್ದೆ ರೆಡಿಯಾಗಿ ಕಾಪಿಹೀರಿ ಹೊರಟದ್ದು ಸಮೀಪದಲ್ಲಿದ್ದ ರಾಗಿ ಹೊಲಕ್ಕೆ. ಕಾಜಾಣಗಳಗುಂಪೊಂದು ಕಂಬದ ಮುಳ್ಳುತಂತಿಯ ಮೇಲೆ ಕುಳಿತು ಬೇಟೆಗಾಗಿ ಹೊಂಚುಹಾಕುತ್ತಿತ್ತು. ಒಂದಂತೂ ಚಂಗನೆ ಹಾರಿ ಚಿಟ್ಟೆಯನ್ನು ಹಿಡಿದೇ ಬಿಟ್ಟಿತು. ಸ್ಚಲ್ಪ ದೂರದಲ್ಲಿ ಕೂತು ನುಂಗಿದ ನಂತರ ಗುಂಪಿನಬಳಿ ಬಂದದ್ದೆ ಕಿಚ ಪಿಚ ಕಿಚ ಪಿಚ ಗಲಾಟೆ, ಅಲ್ಲೆ ಅವುಗಳ ಮಧ್ಯೆಯೇ ಏನೋ ಕಿರಿ ಕಿರಿ, ವೈಮನಸ್ಸೆನೋ, ಒಂದರನೊಂದು ಬೈದಂತೆ, ಅಲ್ಲೆ ಏನೋ ಅದರಬಾಷೆಯಲ್ಲಿ ಸಾಕಷ್ಟು ವಾದವಿವಾದಗಳು, ಅದರ ಮಧ್ಯೆ ನನ್ನಿರುವಿಕೆಗೆ ಕ್ಯಾರೆ ಎನ್ನುವಷ್ಟು ಗಮನವೂ ಇಲ್ಲ (ಇಲ್ಲವಿದ್ದಲ್ಲಿ ಮನುಷ್ಯರನ್ನು ಕಂಡಂತೆ ತುಸು ದೂರ ಹಾರಿಹೋಗುವ ಹಕ್ಕಿ ಅದು). ನನಗಂತು ಅಲ್ಲೇನೋ ಅವುಗಳ ಮಧ್ಯೆ ಬಿನ್ನಾಭಿಪ್ರಾಯವಿದೆ ಅಷ್ಟೆಂಬುದು ಮಾತ್ರ ಅರ್ಥವಾಗುತ್ತಿದೆ ಹೊರತು ಅವು ಏನು ಮಾತಾಡುತ್ತಿವೆ ತಿಳಿಯುತ್ತಿಲ್ಲ, ತಿಳಿಯಲು ಆಸೆ, ಕಾತುರ ಆದರೆ ಅಸಹಾಯಕತೆ. ಸ್ವಲ್ಪಸಮಯದನಂತರ ಆಗುಂಪಿನಲ್ಲಿದ್ದ ಹಕ್ಕಿಗಳು ತಮ್ಮಪಾಡಿಗೆ ಏನೋ ಒಂದು ಒಪ್ಪಂದಮಾಡಿಕೊಂಡಹಾಗೆ ಸುಮ್ಮನಾಗಿ ವಿಭಾಗವಾಗಿ ಬೇರೆ ಬೇರೆ ಕಂಬಗಳ ಮೇಲೆ ಬೇಟೆಗಾಗಿ ಕುಳಿತು ಸುಮ್ಮನಾದವು. ಹಾಗೆ ಆಗುಂಪಿನಿಂದ ಹಾರಿದ ಒಂದು ಹಕ್ಕಿಯನ್ನು ಹಿಂಬಾಲಿಸ ಹೋದದ್ದೇ ಆ ಹೊಲಕ್ಕೆ ಅಂಟಿಕೊಂಡಿದ್ದ ಸರ್ವೇತೋಪಿನತ್ತ ! ಆ ಪ್ರದೇಶಕ್ಕೆ ಬೇರೆ ಯಾವ ಹಕ್ಕಿ ಹೋಗಬೇಕಾದರೂ ಎರಡೆರಡು ಗುಂಡಿಗೆಬೇಕು, ಕಾರಣ ಆಜಾಗ ಗಿಡುಗಗಳ ಅಡ್ಡೆ! ಹೆಚ್ಚುಕಡಿಮೆ ಯಾಮಾರಿದರೆ ಯಾವುದಾದರೊಂದರ ಬೆಳಗ್ಗಿನ ತಿಂಡಿಯಾಗಿಬೆಡಬೇಕಾಗುತ್ತದೆ! ಗಿಡುಗಗಳಿಗೇ ಚಳ್ಳೆಹಣ್ಣು ತಿನ್ನಿಸುವ ಕಾಗೆ, ಕಾಜಾಣಗಳಿಗೆ ಮಾತ್ರ ಈರೀತಿ ದುಸ್ಸಾಹಸ ಯೋಗ್ಯ.... ನಾಹೋದದ್ದೆ ಕೆಳಗೆ ಸಣ್ಣಕಂಬದ ಮೇಲೆ ಕಾಜಾಣ, ಮೇಲೆ ಮರದ ಟೊಂಗೆಯಲ್ಲಿ ಭಾರಿಗಾತ್ರದ ಚುಕ್ಕೆ ಗಿಡುಗ! ಆದಿನ ಸಾರ್ಥಕ.... ಸರಿ ಒಳ್ಳೆಯ ವೀಕ್ಷಣೆಯಾಯಿತೆಂದು ಹಿಂದಿರುಗಿಬರುವಾಗ ಕಂಡದ್ದೆ ಮಿಂಚುಳ್ಳಿ - ಅಲ್ಲಿಗೆ ತಕ್ಷಣ ನೆನಪಿಗೆ ಬಂದಿದ್ದು ಗೆಜ್ಜೆನಾದ ಸಿನೆಮಾದ ಅದ್ಭುತ ಹಾಡು -
"ಮಳ್ಳಿ ಮಳ್ಳಿ ಮಿಂಚುಳ್ಳಿ
ಜಾಣ ಜಾಣ ಕಾಜಾಣ
ಪೂರ್ವ ಪೂರ ಕೆಂಪಾಯ್ತು
ಗಾಳಿ ಗಂಧ ತಂಪಾಯ್ತು
ದಿನವಿಡಿ ಇದೆತರಾ
ಇದ್ದರೆಷ್ಟು ಚೆನ್ನ ಚೆನ್ನ
ಏಳಿ ಏಳಿ ಎಲ್ಲ
ಈ ಭೂಮಿಗಾಯ್ತು ಮೆಲ್ಲ
ಆ ದಿನಾಕರನ ಉದಯ
ದಿವಾಕರನ ಉದಯ" ...........

ಅಲ್ಲೊಂದು ಎರಡು ಗಂಟೆ ಗೊತ್ತಿಲ್ಲದೆ ಕಳೆದುಹೋಯಿತು ಮಿಂಚುಳ್ಳಿಯ ಚಟುವಟಿಕೆ ನೋಡುತ್ತಾ...... ಮುಂದೆ  ಮಿಂಚುಳ್ಳಿಯಿಂದ ಸ್ವಾರಸ್ಯ ಕಾದಿತ್ತು ... ಒಂದೆರಡು ದಿನದಲ್ಲಿ ಬರೆಯುವೆ.....